ಖಂಡವ್ಯಾಪ್ತಿ ತರಗತಿ 

	ಒಬ್ಬ ಉಪಾಧ್ಯಾಯ ಒಂದು ಕಡೆ ಮಾಡುವ ಪಾಠವೊಂದನ್ನು ವಿಶಾಲ ಭೂಪ್ರದೇಶದಲ್ಲಿರುವ ಸಹಸ್ರಾರು ಶಾಲೆಗಳಲ್ಲಿನ ಒಂದು ನಿರ್ದಿಷ್ಟ ತರಗತಿಯ ವಿದ್ಯಾರ್ಥಿಗಳೆಲ್ಲ ಏಕಕಾಲದಲ್ಲಿ ಕಲಿಯಬಹುದಾದ ರೀತಿಯಲ್ಲಿ ಸಾಮೂಹಿಕ ಶಿಕ್ಷಣಕ್ಕಾಗಿ ಮಾಡಿರುವ ಒಂದು ಪ್ರಸಾರವ್ಯವಸ್ಥೆ. ಈ ಕಾರ್ಯಕ್ರಮಕ್ಕೆ ಉಪಗ್ರಹ ಬೋಧನಾತ್ಮಕ ಟೆಲಿವಿಷನ್ ಪ್ರಯೋಗ (ಸ್ಯಾಟಲೈಟ್ ಇನ್ಟ್ರಕ್ಷನಲ್ ಟೆಲಿವಿಷನ್ ಎಕ್ಸ್ ಪೆರಿಮೆಂಟ್=ಎಸ್.ಐ.ಟಿ.ಇ) ಎಂದು ಹೆಸರು. ನುರಿತ ಅಧ್ಯಾಪಕರ ಸೇವೆ ಎಲ್ಲ ಶಾಲೆಗಳಿಗೂ ದೊರಕುವಂತೆ ಮಾಡುವುದೇ ಇಂಥ ವ್ಯವಸ್ಥೆಯ ಉದ್ದೇಶ. ಸಾಮಾನ್ಯವಾಗಿ ಪಾಠವನ್ನು ಭೂಮಿಯಮೇಲಿನ ಟೆಲಿವಿಷನ್ ವ್ಯವಸ್ಥೆಯ ಪ್ರೇಷಕ ಮೊದಲು ಪ್ರಸಾರಮಾಡುತ್ತದೆ. ಕೂಡಲೆ ಆ ಪ್ರದೇಶದ ಮೇಲೆ ಸುತ್ತುತ್ತಿರುವ ಸಂಪರ್ಕ ಉಪಗ್ರಹದಲ್ಲಿ ಅಳವಡಿಸಿರುವ ಗ್ರಾಹಕ ಅದನ್ನು ಗ್ರಹಿಸಿ ತನ್ನ ಪ್ರೇಷಕದ ಮೂಲಕ ಪುನಃ ಪ್ರಸಾರ ಮಾಡುತ್ತದೆ. ಇಂಥ ಕಾರ್ಯಕ್ರಮದ ವಿಷಯ ಮೊದಲೇ ತಿಳಿದಿರುತ್ತದಾಗಿ ದೇಶದ ಎಲ್ಲ ಶಾಲೆಗಳಲ್ಲಿನ ಸಂಬಂಧಪಟ್ಟ ವಿದ್ಯಾರ್ಥಿಗಳೆಲ್ಲ ಆಯಾಶಾಲೆಯಲ್ಲಿ ಸೇರಿ ಪಾಠದಲ್ಲಿ ಭಾಗವಹಿಸುವರು. ಅಲ್ಲಿ ವ್ಯವಸ್ಥೆಗೊಳಿಸಿರುವ ಟೆಲಿವಿಷನ್ ಗ್ರಾಹಕ ಯಂತ್ರಗಳು ಆ ಪಾಠವನ್ನು, ಅಲ್ಲಲ್ಲಿ ಭೂಮಿಯ ಮೇಲೆ ಸ್ಥಾಪಿಸಿರುವ ಮರುಪ್ರಸಾರ ಕೇಂದ್ರಗಳ ಮೂಲಕವೂ ನೇರವಾಗಿ ಉಪಗ್ರಹದ ಮೂಲಕವೂ ಗ್ರಹಿಸಿ ಪ್ರಸಾರ ಮಾಡುತ್ತವೆ. ಇಂಥ ಬೋಧನ ಸೌಲಭ್ಯ ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಆಗಲೆ ಆರಂಭವಾಗಿದೆ. ಭಾರತದಲ್ಲಿ 1974ರ ವೇಳಗೆ ಇದನ್ನು ಆರಂಭಿಸುವ ಯೋಜನೆಯಿದೆ.

	ಟೆಲಿವಿಷನ್ ಶಾಲಾಪ್ರಸಾರ ಕಾರ್ಯಕ್ರಮ ಈಗಾಗಲೆ ಪ್ರಚಾರಕ್ಕೆ ಬಂದಿದ್ದರೂ ಅದು ಕೇವಲ ಹತ್ತಿರದಲ್ಲಿರುವ ಶಾಲೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಸಂಪರ್ಕ ಉಪಗ್ರಹದ ಸಹಾಯದಿಂದ ಅದೇ ಕಾರ್ಯಕ್ರಮವನ್ನು ವಿಶಾಲ ಭೂಪ್ರದೇಶದಲ್ಲಿ ಹರಡಿರುವ ಶಾಲೆಗಳಿಗೆಲ್ಲ ಮುಟ್ಟಿಸಲು ಸಾಧ್ಯವಾಗುತ್ತದೆ. ಒಬ್ಬ ಅಧ್ಯಾಪಕನ ಪಾಠವನ್ನು ಲಕ್ಷಾಂತರ ವಿದ್ಯಾರ್ಥಿಗಳು ಕೇಳಿ, ನೋಡಿ ಕಲಿಯಲು ಇದರಿಂದ ಅವಕಾಶವಾಗುತ್ತದೆ. ಅಧ್ಯಾಪಕರ, ಅದರಲ್ಲೂ ವಿಜ್ಞಾನ, ಗಣಿತ ಮುಂತಾದ ವಿಷಯಗಳ ಅಧ್ಯಾಪಕರ ಅಭಾವವನ್ನು ನಿವಾರಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಇರತಕ್ಕ ಅಧ್ಯಾಪಕರಲ್ಲೆ ಅತ್ಯಂತ ದಕ್ಷರಾದವರನ್ನು ಆರಿಸಿಕೊಂಡು ಪಾಠ ಮಾಡಿಸಿ ಪ್ರಸಾರ ಮಾಡುವುದರಿಂದ ಇಡೀ ದೇಶದ ಆ ತರಗತಿಯ ವಿದ್ಯಾರ್ಥಿಸಮೂಹಕ್ಕೆ ಅವರ ದಕ್ಷ ಬೋಧನೆಯ ಸೌಲಭ್ಯವನ್ನು ದೊರೆಕಿಸಿಕೊಡಬಹುದು. ಶಿಕ್ಷಣ ಕಾರ್ಯದಲ್ಲಿ ಇಂಥ ತಾಂತ್ರಿಕ ವ್ಯವಸ್ಥೆಯ ಬಳಕೆಯಿಂದ ವಿದ್ಯಾರ್ಥಿಗಳಲ್ಲೂ ಅಧ್ಯಾಪಕರಲ್ಲೂ ಕಾಲನಿಷ್ಠೆ, ಎಚ್ಚರಿಕೆ, ಅವಧಾನದ ಕ್ರೇಂದ್ರೀಕರಣ ಇವೇ ಮುಂತಾದ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಬಹುದು.

	ಖಂಡವ್ಯಾಪಿ ತರಗತಿಯಲ್ಲಿ ಟೆಲಿವಿಷನ್ ಸೌಲಭ್ಯ ಇರುತ್ತದಾಗಿ ವಿದ್ಯಾರ್ಥಿಗಳು ಉಪಾಧ್ಯಾಯರು ಮಾಡುವ ಪಾಠಪ್ರವಚನವನ್ನು ಕೇಳುವುದರ ಜೊತೆಗೆ ಎಲ್ಲವನ್ನೂ ಕಣ್ಣಾರ ನೋಡಬಹುದು. ಎಂದರೆ ಅವರ ಬೋಧನೆಯನ್ನು ಕೇಳುವುದರ ಜೊತೆಗೆ ಉಪಾಧ್ಯಾಯರನ್ನೂ ಅವರು ಪ್ರದರ್ಶಿಸುವ ಉಪಕರಣಾದಿಗಳನ್ನೂ ನಿದರ್ಶಿಸುವ ಪ್ರಯೋಗಗಳನ್ನೂ ನೋಡಬಹುದು. ಕೆಲವು ದುಬಾರಿ ಬೆಲೆಯ ಉಪಕರಣಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗುವಂತೆ ಪಾಠ ಮಾಡಬಹುದಾದ ಅವಕಾಶವಿರುವ ಶಾಲೆಯೊಂದರ ಪಾಠಸೌಲಭ್ಯವನ್ನು ಅಂಥ ಯಾವ ಅವಕಾಶವೂ ಇಲ್ಲದ ಇತರ ಶಾಲೆಗಳಿಗೆ ದೊರಕಿಸುವುದು ಇಂಥ ವ್ಯವಸ್ಥೆಯಿಂದ ಸಾಧ್ಯ. ಒಂದೇ ಮಾತೃಭಾಷೆಯನ್ನುಳ್ಳ ವಿಶಾಲ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಾದೇಶಿಕ ವೈಪರೀತ್ಯಗಳನ್ನು ಇಂಥ ಕಾರ್ಯಕ್ರಮದ ಮೂಲಕ ಕಡಿಮೆ ಮಾಡಿ ಭಾಷೆಯ ಬಳಕೆಯಲ್ಲಿ ಏಕರೂಪವನ್ನು ಸಾಧಿಸಲು ಅವಕಾಶವಿದೆ. ಅನ್ಯಭಾಷಾ ಬೋಧನೆಯಲ್ಲೂ ಉಚ್ಚಾರಣೆ, ಪ್ರಯೋಗ ಮುಂತಾದ ಅಂಶಗಳನ್ನು ಸ್ಪಷ್ಟವಾಗಿಯೂ ಶಾಸ್ತ್ರೀಯವಾಗಿಯೂ ಬೋಧಿಸಬಲ್ಲ ಅಧ್ಯಾಪಕರ ಸೇವೆಯನ್ನು ಬಳಸಿಕೊಂಡಲ್ಲಿ ಆ ಭಾಷೆಯಲ್ಲೂ ಏಕರೂಪವನ್ನು ಸಾಧಿಸಬಹುದು.

	ಹಲವಾರು ಭಾಷೆಗಳಿರುವ ಭಾರತದಂಥ ಉಪಖಂಡದಲ್ಲಿ ಒಂದೊಂದು ರಾಜ್ಯವೂ ತನ್ನದೇ ಆದ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಬಹುದು. ವಿಶಾಲ ಭೂ ಪ್ರದೇಶದಲ್ಲೆಲ್ಲ ಒಂದೇ ಶಿಕ್ಷಣ ಮಾಧ್ಯಮವನ್ನು ಬಳಸುವ ಅಮೆರಿಕದ ಸಂಯುಕ್ತ ಸಂಸ್ಥಾನದಂಥ ಭೂಪ್ರದೇಶಗಳಲ್ಲಿ ಇದು ಇನ್ನೂ ಹೆಚ್ಚು ಲಾಭದಾಯಕವಾದ ಕಾರ್ಯಕ್ರಮವಾಗಬಲ್ಲುದು.		(ಎನ್.ಎಸ್.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ